Wednesday, October 5, 2022

ಹಸಿರು ಪಾರಿವಾಳ

ಹೂವಿನಹಡಗಲಿಯಲ್ಲಿ ಅರಿಸಿನ ಕಾಲಿನ ಹಸಿರು ಪಾರಿವಾಳ ಪ್ರತ್ಯಕ್ಷ.
 ಈ ದಿನ ಬನ್ನಿ ಮುಡಿಯೋ ಹಬ್ಬ . ಅಂದ್ರೆ ದಸರಾ ಹಬ್ಬದ ದಿನ ಬನ್ನಿ ಸೊಪ್ಪನ್ನು ತರೋಣ ಎಂದು ಸಂಜೆ 4 ಗಂಟೆಗೆ ಊರ ಹೊರಗೆ ಹೊರಟೆ. ಹೋಗುವಾಗ ಹಕ್ಕಿಗಳ ಛಾಯಾಗ್ರಹಣಕ್ಕೆ ಕ್ಯಾಮೆರಾನೂ ತೆಗೆದುಕೊಂಡೆ.  ಹಡಗಲಿ  ಮುಂಡರಗಿ ರಸ್ತೆಯ ಎಡಬಲಗಳಲ್ಲಿ ಬನ್ನಿಗಿಡವನ್ನು ಹುಡುಕುತ್ತಾ , ಪೈರುತುಂಬಿ ಬೀಗುವ ಹೊಲಗಳಲ್ಲಿ ಪಕ್ಷಿಗಳನ್ನು ಹರಸುತ್ತಾ4 ಕಿಮೀ ಹೋಗಿದ್ದೆ, ಬನ್ನಿಗಿಡ ಸಿಕ್ಕಿತು ಬನ್ನಿ ಸೊಪ್ಪನ್ನು ಬಿಡಿಸಿಕೊಂಡು ಬೈಕ್ ಶುರುಮಾಡಬೇಕು ಎನ್ನುವಷ್ಟರಲ್ಲಿ ಎರಡು ಬೆಳವ ಜೋಳದ ಹೊಲದಲ್ಲಿ ಜೋಳದ ತೆನೆಯ ಕಾಳನ್ನು ತಿನ್ನುವುದು ಕಂಡೆ, ಮೆಲ್ಲನೆ 📷 ಕ್ಯಾಮೆರಾ ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಂದು ಗಿಡದ ಮರೆಯಲ್ಲಿ ನಿಂತು ಕ್ಲಿಕ್ಕಿಸಿದೆ, ಅವುಗಳ ಪಕ್ಕದಲ್ಲಿ ನಾಲ್ಕೈದು ಹಸಿರು ಪಾರಿವಾಳಗಳು ಕಾಳು ಮೇಯುದನ್ನು ನೋಡಿ ರೋಮಾಂಚನವಾಯ್ತು. ಅವುಗಳ ಬಣ್ಣ ಹಸಿರಾದದ್ದರಿಂದ ಹಸಿರು ಬೆಳೆಯ ನಡುವೆ ನನಗೆ ಬೇಗ ಗುರುತಿಸಲು ಆಗಲಿಲ್ಲ. ನಾನು 8 ವರ್ಷಗಳ ಪಕ್ಷಿ ಅಧ್ಯಯನದಲ್ಲಿ   ಎಂದೂ ಸಿಗದ, ದಾಖಲಾಗದ ಅಪರೂಪದ ಅತಿಥಿಗಳನ್ನು ನೋಡಿ ಮಹಾದಾನಂದವಾಯ್ತು.   ಅವುಗಳ 7,8 ಫೋಟೊ ಕ್ಲಿಕ್ಕಿಸಿದೆ.  ತಲ್ಲೀನತೆ ಯಿಂದ ಮೇಯುತ್ತಿದ್ದ ಅವು, ನನ್ನು ನೋಡಿದ್ದೇ ಹಾರಿಹೋದವು. ಹಸಿರು ಪಾರಿವಾಳಗಳು ಪಶ್ಚಿಮ ಘಟ್ಟಗಳಲ್ಲಿ, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, ಹಿಮಾಲಯ ಪರ್ವತ ತಪ್ಪಲಿನಲ್ಲಿ ದೊಡ್ಡ  ಮರಗಳ ಮೇಲೆ ವಾಸ ಮಾಡುವ ಇವುಗಳನ್ನು ಹಸಿರು ಎಲೆಗಳ ನಡುವೆ ಗುರುತಿಸುವುದು ಕಷ್ಟ.  ಮಲೆನಾಡಿನಲ್ಲಿ ವಾಸಿಸುವ ಇವು ಬಯಲುಸೀಮೆ ಹೂವಿನಹಡಗಲಿ ಯಲ್ಲಿ ಕಾಣಿಸಿದ್ದು, ಆಶ್ಚರ್ಯ ಉಂಟುಮಾಡಿದೆ. ಬಹುಶಃ ಇವು ಆಹಾರದ ಅನ್ವೇಷಣೆಯಲ್ಲಿ ವಲಸೆ ಹೋಗುವಾಗ ಕೆಲಕಾಲ ಇಲ್ಲಿ ತಂಗಿವೆ ಎನಿಸುತ್ತದೆ.  ಮಳೆಗಾಲದ ಪ್ರಾರಂಭದಲ್ಲಿ ಸಂಡೂರಿನ  ಕಾಡಿನತ್ತ ಈ ಪಕ್ಷಿಗಳು ವಲಸೆ ಬರುತ್ತವೆ. ನಂತರ ಸೆಪ್ಟೆಂಬರ್-ಅಕ್ಟೋಬರ್ ಕೊನೆಯಲ್ಲಿ ತಮ್ಮ ಮೂಲಸ್ಥಾನಕ್ಕೆ ತೆರಳುತ್ತವೆ. ಇವು ಬಹಳ ನಾಚಿಕೆ ಸ್ವಭಾವದವು.  ಹಸಿರು ಪಾರಿವಾಳಗಳು ಮಹಾರಾಷ್ಟ್ರದ ರಾಜ್ಯಪಕ್ಷಿಯಾಗಿದೆಅಲ್ಲಿ ಹರಿಯಾಲ್‌ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.  ಹಳದಿ ಬಣ್ಣದ ಕಾಲುಗಳನ್ನು ಹೊಂದಿದ್ದು, ಹಿಂಡಿನಲ್ಲಿ 7,8 ಪಕ್ಷಿಗಳು ಇರುತ್ತವೆ. ಇವುಗಳ ಇನ್ನೊಂದು ವಿಶೇಷತೆ ಏನೆಂದರೆ ಇವು ನೆಲದ ಮೇಲೆ ಕುಳಿತುಕೊಳ್ಳುವುದೇ ಇಲ್ಲ.  

No comments:

Post a Comment