"ಜಾತಕ ಪಕ್ಷಿಯ ಜಾತಕ " (paid cocko)
ಮುಂಗಾರು ಮಳೆಗೂ ಚಾತಕ ಪಕ್ಷಿಗೂ ರೈತರಿಗೂ ಆದಿ ಕಾಲದಿಂದಲು ಅವಿನಾಭಾವ ಸಂಬಂಧ. ಮೇಲಿಂದ ಬೀಳುವ ಮಳೆ ನೀರು ಕುಡಿಯಲು ಗಂಟೆ ಗಟ್ಟಲೆ ಕಾದು ಕುಳಿತಿರುತ್ತೆ ಈ ಪಕ್ಷಿ.
ಹೌದು ಜಾತಕ ಪಕ್ಷಿ ಕೋಗಿಲೆ ಗಣಕ್ಕೆ ಸೇರಿದ ಪಕ್ಷಿಯಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಭಾಗಶಃ ವಲಸೆ ಮಾಡುವ ಪಕ್ಷಿಯಾಗಿದ್ದು, ಒಂದೇ ಕಡೆ ನೆಲೆ ಊರಲಾರದು. ವಿಶೇಷ ಅಂದ್ರೆ ಮುಂಗಾರು ಋತುವಿನ ಮಳೆಯ ಪ್ರಾರಂಭಕ್ಕು ಮತ್ತು ಚಾತಕ ಪಕ್ಷಿಗೂ ಅವಿನಾಭಾವ ಸಂಭಂಧವಿದೆ. ಈ ಪಕ್ಷಿಯನ್ನ ಇಂಗ್ಲಿಷ್ನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ.
ಭಾರತೀಯ ಜಾನಪದ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದಲ್ಲಿ ಕೇವಲ ನಾಲ್ಕು ಹನಿ ನೀರಿಗೆ ಈ ಚಾತಕಪಕ್ಷಿ ಎಷ್ಟೋ ಗಂಟೆ, ಎಷ್ಟೋ ದಿನಗಳ ಕಾಲ ಕಾದು ಕುಳಿತಿರುತ್ತದೆ. ಮೇ ತಿಂಗಳ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕಪಕ್ಷಿ ರೈತರ ಕಣ್ಣಿಗೆ ಬೀಳುತ್ತದೆ. ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆ ಆಗುತ್ತದೆ ಎನ್ನುತ್ತದೆ ನಮ್ಮ ಜನಪದ ನಂಬಿಕೆ.ಚಾತಕ ಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹದ ಪುಕ್ಕ ಇರುವುದರಿಂದ ಗ್ರಾಮೀಣ ಭಾಗದ ರೈತರು ಜುಟ್ಟು-ಕೋಗಿಲೆಯಂತಲೂ ಇದನ್ನ ಕರೆಯುತ್ತಾರೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹ ಮಾಡಿಕೊಂಡು ಹನಿ ಹನಿ ನೀರು ಕುಡಿಯುತ್ತದೆ. ಇದು ಉಳಿದ ಪಕ್ಷಿಗಳಂತೆ ಕೆರೆ ನೀರು, ನದಿ ನೀರು ಮತ್ತು ನಿಂತ ನೀರನ್ನು ಕುಡಿದರೂ ಸಹ, ಮುಂಗಾರಿನ ಪ್ರಥಮ ಮಳೆಹನಿಗಳಿಗಾಗಿ ವರುಣ ದೇವರಲ್ಲಿ ಪ್ರಾರ್ಥಿಸುತ್ತದೆಯಂತೆ. ಅದರ ಪ್ರಾರ್ಥನೆಯನ್ನು ಪ್ರತಿ ಸಲ ವರಣ ದೇವನು ಮನ್ನಿಸುತ್ತಾ ನೀರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಚಾತಕ ಪಕ್ಷಿಯ ನೀರಡಿಕೆ ತಣಿಸಲು ಮಳೆ ಆಗುತ್ತದೆ ಎಂಬುದು ಪೂರ್ವಜರ ಮಾತು. ಈ ಪಕ್ಷಿಯ ವಿಶೇಷವೆಂದರೆ ಇದು ನೀರಿಲ್ಲದೆ ಎಷ್ಟೋ ದಿನಗಳವರೆಗೆ ಬದುಕಬಲ್ಲದು. ಈ ಪಕ್ಷಿ ಕುರಿತು ಕವಿರತ್ನ ಕಾಳಿದಾಸ ಕೂಡ ತನ್ನ ಮೇಘದೂತ ಕಾವ್ಯದಲ್ಲಿ ಪ್ರಸ್ತಾಪಿದ್ದಾನೆ. ಚಾತಕ ಪಕ್ಷಿಯ ಈ ವಿಶೇಷ ಗುಣದಿಂದಾಗಿ ಇದನ್ನು ಮುಂಗಾರು ಮಳೆಯ ಮುನ್ಸೂಚಕ ಎಂದು ಪರಿಗಣಿಸಲಾಗುತ್ತದೆ.
ಇದು ಮಧ್ಯಮ ಗಾತ್ರದ ತೆಳ್ಳಗಿರುವ ಕಪ್ಪು ಮತ್ತು ಬಿಳಿ ರೆಶ್ಮೆಯಂತ ಜುಟ್ಟನ್ನು ಮತ್ತು ರೆಕ್ಕೆಗಳ ಮೇಲೆ ಬಿಳಿ ರೆಕ್ಕೆಪಟ್ಟಿಗಳನ್ನು ಹೊಂದಿರುವುದರಿಂದ ನೋಡಲು ತುಂಬಾ ಆಕರ್ಶಕವಾಗಿ ಕಾಣುತ್ತದೆ. ಚಾತಕ-ಹೆಣ್ಣು ಹಕ್ಕಿಯು ಮೊಟ್ಟೆಯನ್ನು ಬೇರೆ ಪಕ್ಷಿಗಳ ಗೂಡುಗಳಲ್ಲಿಡುವುದರಿಂದ ಇದನ್ನು ಪ್ಯಾರಸೈಟ್ ಬ್ರೀಡರ್-(ಪರಾವಲಂಬಿ ಸಂಸಾರಿ) ಎನ್ನುತ್ತಾರೆ. ಆವಾಸ ನಾಶ, ಆಧುನಿಕವಾಗಿ ಬದಲಾದ ಕೃಷಿ ಪದ್ಧತಿ ಮತ್ತು ರಸ್ತೆ ಅಪಘಾತಗಳಲ್ಲಿಯು ಸಹ ಇವು ಸಾವನ್ನುಪ್ಪುವದರಿಂದ ಈ ಹಕ್ಕಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ. ಹಡಗಲಿಯ ಅಲ್ಲಿಲ್ಲಿ ತೋಟಗಳಲ್ಲಿ ಈ ಪಕ್ಷಿ ಕಾಣಸಿಗುತ್ತದೆ. ಇದು ಜನರ ಕಣ್ಣಿಗೆ ಬೀಳೋದು ಅಪರೂಪ. ನಿನ್ನೆ ನಾನು ಅಲ್ಲೀಪುರದ ಹೊಲಕ್ಕೆ ಹೋದಾಗ ಚಾತಕ ಕ್ಷಿಯನ್ನು ಕಂಡು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ವಿಶೇಷ ಅಂದ್ರೆ ಮುಂಗಾರು ಋತುವಿನಲ್ಲಿ ಹಡಗಲಿಯ ನೀರಾವರಿ ಪ್ರದೇಶ ಹಾಗೂ ತಂಪಾದ ಪ್ರದೇಶದಲ್ಲಿ ಇದುಹೆಚ್ಚಾಗಿ ಕಾಣಸಿಗುತ್ತವೆ. ಆದ್ರೆ ಬೇರೆ ಪಕ್ಷಿಗಳಂತೆ ಹಿಂಡು ಹಿಂಡಾಗಿ ಇವು ಕಾಣಸಿಗುವುದಿಲ್ಲ, ಒಂದೋ ಎರಡೋ ಹಕ್ಕಿಗಳು ಕಾಣಸಿಗುತ್ತೆ
No comments:
Post a Comment