Monday, January 13, 2025

ಬಾಲದಂಡೆ ಹಕ್ಕಿ (Paradise Flycatcher)


 "ಮೋಹಕ ಬಾಲದ ಬಲದಂಡೆ ಹಕ್ಕಿ"


ಪ್ರಾಣಿ ಪಕ್ಷಿಗಳ ಲೋಕ ವಿಸ್ಮಯಗಳ ಆಗರ. ಚಳಿಗಾಲದ ಭಾನುವಾರದ ಮುಂಜಾನೆ ಕ್ಯಾಮರಾ ಹೆಗಲೇರಿಸಿ ಹಡಗಲಿಯ ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಅದಕ್ಕೆ ಹೊಂದಿ ಕೊಂಡ ಬಾಲಭವನದ ಕಡೆ ಹೊರಟೆ. ಒಂದು ವರ್ಷದ ಹಿಂದೆ ಬಾಲಭವನದಲ್ಲಿ ಬಾಲದಂಡೆ ಹಕ್ಕಿಯನ್ನು ಕಂಡು ರೋಮಾಂಚಿತನಾಗಿದ್ದೆ.  ಆದರೆ ದೂರದಿಂದ ತೆಗೆದ ಫೋಟೋ ಅಷ್ಟೊಂದು ಚನ್ನಾಗಿ ಬಂದಿರಲಿಲ್ಲ. ಈ ಹಕ್ಕಿಯ ಛಾಯಾಚಿತ್ರ ತೆಗೆಯಲು 8,10 ಬಾರಿ ಅಲ್ಲಿಗೆ ಹೋದರೂ ಬರಿಗೈಲಿ ವಾಪಸಾಗಿದ್ದೆ. ಆದರೆ ಇಂದು ಬಿ. ಆರ್. ಸಿ ಯ ಹತ್ತಿರ ಹೋಗಿ ಮೋಟಾರಿನಿಂದ ಇಳಿದು ಕ್ಯಾಮರಾ ಕೈಗೆತ್ತಿಕೋಳ್ಳುತ್ತಿರುವಾಗ ಕಂದು ಬಣ್ಣದ ಬಾಲಂಗೋಚಿಯಂತಹ ಬಾಲದ ಪಿಕಳಾರ ಗಾತ್ರದ ಹಕ್ಕಿ ಸರ್ರನೆ ಹಾರಿ ಅರಳೀಮರದಲ್ಲಿ ಮಾಯವಾಯಿತು. ನನಗೆ ಆನಂದವೋ ಆನಂದ.  ಅದೇ ನಾನು ಇಷ್ಟು ದಿನ ಬಯಸಿದಂತ "ಬಾಲದಂಡೆ" ಹಕ್ಕಿ ಅದಾಗಿತ್ತು. ತಕ್ಷಣ ಕ್ಯಾಮರಾದ ಕಣ್ಣರಳಿಸಿ ಅದು ಹೋದ ಕಡೆ ನೋಡಿದರೆ, ನನ್ನ ಎದುರುಗಡೆಯ ಕೊಂಬೆಯಲ್ಲಿ ಪ್ರತ್ಯಕ್ಷ. ಕ್ಯಾಮರಾ ಜೂಮ್  ಮಾಡುವಷ್ಟರಲ್ಲಿ ಹಾರಿ ಇನ್ನೊಂದು ರೆಂಬೆಯ ಮೇಲೆ ಕುಳಿತಿತು. ಅಲ್ಲಿಂದ ಮ್ಯೂಸಿಯಂ ಮುಂಭಾಗದ ವಿದ್ಯುತ್ ತಂತಿಯ ಮೇಲೆ ಕುಳಿತು ಕ್ಯಾಮರಾಗೆ "ಫೋಸ್" ಕೊಟ್ಟಿತು.  ಎರಡು ಫೋಟೋ ತೆಗೆಯಲು ಅವಕಾಶ ಕೊಟ್ಟು ಅಪ್ಸರೆಯಂತೆ ಬಳುಕುತ್ತ, ಹಾರಿಹೋಯಿತು. ಪಕ್ಷಿಗಳಲ್ಲಿಯೇ ಸುಂದರವಾದ ಹಕ್ಕಿ "ಬಾಲದಂಡೆ" ಹಕ್ಕಿ. ವಯಸ್ಕ ಗಂಡು ಹಕ್ಕಿಗೆ 40ರಿಂದ 50 ಸೆಂಟಿಮೀಟರ್ ಉದ್ದದ ಎರಡು ಬಾಲದಂತ ಗರಿಗಳಿರುವುದರಿಂದ ಬಾಲದಂಡೆ ಎಂದು ಕರೆದಿದ್ದಾರೆ.   ಸಂಸ್ಕೃತದಲ್ಲಿ  "ಅರ್ಜುನಕ" ಎಂದು ಕರೆಯಲ್ಪಡುವ ಈ ಹಕ್ಕಿ ಅರ್ಜುನ (ಮತ್ತಿ ಗಿಡ) ಮರದಲ್ಲಿ ವಾಸಮಾಡುತ್ತದೆ. ಹಿಂದಿಯಲ್ಲಿ "ದೂದ್ ರಾಜ್" ಎಂದೂ , ಇದರ ಬಾಲ ಹೆಂಗಳೆಯರ ಕೇಶದಂತೆ ಇರುವುದರಿಂದ ರಜ್ಜುವಾಲ (ರಜ್ಜು ಎಂದರೆ ಜಡೆ ಎಂದರ್ಥ) ಎಂದು ಕರೆಯುತ್ತಾರೆ.  ಈ ಹಕ್ಕಿ ಸದಾ ತಂಪು ವಾತಾವರಣವಿರುವ ದಟ್ಟವಾದ ಮರಗಳು ಇರುವ, ಬಿದಿರಿನ ಮೆಳೆಗಳಿರುವ ಸ್ವರ್ಗದಂತಹ  ವಾತಾವರಣದಲ್ಲಿ ವಾಸಿಸುವುದರಿಂದ  ಇದನ್ನು ಇಂಗ್ಲೀಷಿನಲ್ಲಿ"" Paradise Flycatcher"" ಎಂದು ಕರೆಯುತ್ತಾರೆ. 

ಇದರ ಮುಖದ ಬಣ್ಣ ನೀಲುಗಪ್ಪು ಬಣ್ಣದಿದ್ದು ತಲೆಯ ಮೇಲೆ ಕಿರೀಟದಂತಹ ಶಿಖೆಯನ್ನು ಹೊಂದಿರುತ್ತದೆ. ಮುಖ ಮತ್ತು ಶಿಖೆಯನ್ನು ಹೊರತು ಪಡಿಸಿ ಕಂದು ಬಣ್ಣವಿರುತ್ತದೆ. ಗಂಡಿಗೆ ನೀಳವಾದ ಬಾಲವಿದ್ದು, ಹೆಣ್ಣಿಗೆ ಬಾಲವಿರುವುದಿಲ್ಲ. ಮುಸ್ಸಂಜೆಯ ಹೊತ್ತಿನಲ್ಲಿ ನೀರಿನಲ್ಲಿ ತನ್ನ ನೀಳವಾದ ಬಾಲವನ್ನು ಅದ್ದಿ ಜಳಕ ಮಾಡಿದ ನಂತರ ಗೂಡು ಸೇರಿಕೊಳ್ಳುತ್ತದೆ


                               ಲೇಖನ ಮತ್ತು ಛಾಯಾಚಿತ್ರ

                          ಸೋಮೇಶಪ್ಪ ಸಿ ಎನ್

            ಕನ್ನಡ ಶಿಕ್ಷಕರು, ವಿಕೆಕೆ ಕೆಪಿಎಸ್ ಪ್ರೌಢಶಾಲಾ ವಿಭಾಗ, ಹಿರೇಹಡಗಲಿ ಹಡಗಲಿ ತಾ ವಿಜಯನಗರ ಜಿ

No comments:

Post a Comment