ಕಿರಿಯ ಸಿಪಾಯಿ ಕೊಕ್ಕರೆ ( ಲೇಸರ್ ಅಡ್ಜೆಂಟ್ ಸ್ಟಾರ್ಟ್) Lesser Adujent Stork.
ಕನ್ನಡದಲ್ಲಿ ಕಿರಿಯ ಸಿಪಾಯಿ ಕೊಕ್ಕರೆ ಎಂದು ಕರೆಯುವ ಈ ಕೊಕ್ಕರೆ ಕೊಕ್ಕರೆಗಳಲ್ಲಿಯೇ ಅತಿ ದೈತ್ಯ ಗಾತ್ರದ್ದು. ಇದು ಗ್ರೇಟ್ ಅಡಜಂಟ್ ತರಹವೇ ಇದೆ.
ಇದರ ಎತ್ತರ 4 ರಿಂದ 5 ಅಡಿ. ರೆಕ್ಕೆಗಳನ್ನ ಬಿಚ್ಚಿದಾಗ ಎಂಟರಿಂದ ಒಂಬತ್ತು ಅಡಿ ಇದರ ರೆಕ್ಕೆಗಳು ಇರುತ್ತವೆ. ಈ ಪಕ್ಷಿ ಬರೋಬ್ಬರಿ 5 ರಿಂದ 8 ಕೆಜಿ ತೂಗುತ್ತದೆ. ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕನ್ಸರ್ವೇಷನ್ ಆಫ್ ನೇಚರ್ ಈ ಒಕ್ಕೂಟವು ಕಿರಿಯ ಸಿಪಾಯಿ ಕೊಕ್ಕರೆಯನ್ನು ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಇಂತಹ ಪಕ್ಷಿಯನ್ನು ನಾನು ನಾಲ್ಕು ವರ್ಷದ ಹಿಂದೆಯೇ ಅಲ್ಲೀಪುರದ ಡ್ಯಾಂ ನ ಹಿನ್ನೀರ ಪ್ರದೇಶದಲ್ಲಿ ನೋಡಿ ಅದರ ಅಜಾನುಬಾಹು ಆಕಾರನೋಡಿ ಕ್ಲಿಕ್ಕಿಸಿದ್ದೆ. ಆದರೆ ಈ ಪಕ್ಷಿಯ ಬಗ್ಗೆ ಮಾಹಿತಿಯ ಕೊರತೆಯಿಂದ ಸುಮ್ಮನಾದೆ. ಮೊನ್ನೆ ಯಾವುದೋ ಹಳೆಯ ದಿನಪತ್ರಿಕೆಯಲ್ಲಿ ಈ ಪಕ್ಷಿಯ ಸಂರಕ್ಷಣೆ ಮಾಡಿದ ಮಹಿಳೆ ಪೂರ್ಣಿಮಾ ಬರ್ಮನ್ ರವರ ಬಗ್ಗೆ "ಹರ್ಗಿಲಾ ಆರ್ಮಿ" ಎಂಬ ಲೇಖನ ಓದಿದೆ.ಅದರಲ್ಲಿ ಹರ್ಗಿಲಾ (Great Adjunt Stork) ಎಂಬ ಪಕ್ಷಿಯ ಬಗ್ಗೆ ಓದುತ್ತಾ ಹೋದಂತೆ ತಟ್ಟನೆ ನಾಲ್ಕು ವರ್ಷದ ಹಿಂದೆ ಕ್ಲಕ್ಕಿಸಿದ್ದ ಇದೇ ತರಹದ ಪಕ್ಷಿಯ ನೆನಪಾಗಿ ಕಂಪ್ಯೂಟರ್ ನಲ್ಲಿ ಸೇವ್ ಆಗಿದ್ದ ನೂರಾರು ಫೋಟೋ ಹುಡುಕಾಡಿದಾಗ ಆ ಪಕ್ಷಿಯ, 8_,10 ಫೋಟೋಗಳು ಸಿಕ್ಕಿದವು. ಲೇಖನದಲ್ಲಿರುವ ಪಕ್ಷಿಗೂ ಹೋಲಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಸಲೀಂ ಅಲಿಯವರ Indian Birds ಪುಸ್ತಕವನ್ನು ನೋಡಿದ ಮೇಲೆ ಗೊತ್ತಾಯ್ತು ಇದು ಕಿರಿಯ ಸಿಪಾಯಿ ಕೊಕ್ಕರೆ ಎಂದು. ನಾಲ್ಕು ವರ್ಷದ ಹಿಂದೆ, ಅದು ಮುಂಗಾರು ಶುರುವಾಗುವ ಸಮಯ ; ಕ್ಯಾಮರಾ ಹೆಗಲಿಗೇರಿಸಿ ಅಲ್ಲೀಪುರದ ಡ್ಯಾಂನ ಹಿನ್ನೀರಿನ ದಡದಲ್ಲಿ ಕ್ಯಾಮರಾ ಹಿಡಿದು ಹೊರಟೆ. ಆ ಹಿನ್ನೀರಿನ ಮೊಳಕಾಲು ಉದ್ದದ ನೀರಿನಲ್ಲಿ ಲೇಸರ್ ರೆಸ್ಲಿಂಗ್ ಡಕ್, ದೊಡ್ಡ ನೀರ ಕಾಗೆ, ಚುಕ್ಕೆ ಕೊಕ್ಕು ಬಾತುಕೋಳಿ, ಕೆನ್ನೀಲಿ ಬಕ, ಇವುಗಳ ಗುಂಪಿನಲ್ಲಿ ಒಂದು ದೊಡ್ಡ ದೈತ್ಯ ಪಕ್ಷಿ ನನಗೆ ಕಂಡಿತು. ಅದು ನೀರಿನಲ್ಲಿ ಜಲಚರಗಳನ್ನ ಹಿಡಿದು ತಿನ್ನೋದರಲ್ಲಿ ನಿರತವಾಗಿತ್ತು. ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿದ ನಂತರ ಅದು ಹಾರಿ ದಡದ ಮೇಲೆ ಬಂದು ಕುಳಿತುಕೊಂಡಿತು. ಅದು ಕುಳಿತುಕೊಂಡ ಜಾಗ ಕಸ ಕಡ್ಡಿಯಿಂದ ಕೂಡಿದ ಕೊಳಕು ಜಾಗವಾಗಿತ್ತು. ಇನ್ನು ನಾಲ್ಕೈದು ಫೋಟೇ ಕ್ಲಿಕ್ಕಿಸಿದ ಮೇಲೆ . ಅದು ಹಾರಲು ರೆಕ್ಕೆಗಳನ್ನು ಬಿಚ್ಚಿತು. ಅದು ರೆಕ್ಕೆ ಬಿಚ್ಚಿದಾಗ ಎಂಟರಿಂದ ಒಂಬತ್ತು ಅಡಿ ಅಗಲವಾಗಿತ್ತು. ನೋಡಿ ರೋಮಾಂಚನವಾಯ್ತು. ಅದು ಮೇಲೆ ಟೇಕಾಪ್ ಮಾಡುವಾಗ ಅಲ್ಲಿದ್ದ ಹಕ್ಕಿಗಳೆಲ್ಲ ಚದುರಿಹೋದವು. ಅದು ಸ್ವಲ್ಪ ಎತ್ತರದವರೆಗೆ ರೆಕ್ಕೆಗಳನ್ನು ಬಡಿಯುತ್ತ ಹಾರಿ, ನಂತರ ರೆಕ್ಕೆಗಳನ್ನು ಬಡಿಯದೇ ರೆಕ್ಕೆಗಳನ್ನು ಚಾಚಿ ವೃತ್ತಾಕಾರವಾಗಿ ಮೇಲೇರುತ್ತಿತ್ತು! ಏರುತ್ತ ಏರುತ್ತ ಸಣ್ಣ ಚುಕ್ಕಿಯಷ್ಟಾಯಿತು. ನಂತರ ಆಕಾಶದ ನೀಲಿಯಲ್ಲಿ ಮಾಯವಾಯಿತು. ಬಿಸಿಲಿಗೆ ಕಾದ ಬಿಸಿಗಾಳಿ ಮೇಲೇರುತ್ತದೆ. ಈ ಗಾಳಿಗೆ ರೆಕ್ಕೆಗಳನ್ನು ಒಡ್ಡಿ ಗಾಳಿಯ ಜೊತೆಗೇ ಮೇಲೇರುತ್ತೆ ಈ ಪಕ್ಷಿ.
No comments:
Post a Comment